ADVERTISEMENT

ಲೂಸ್‌ಗಳು: ಅಪೂರ್ಣ ಲೂಜ್‌ಗಳು!

ಲೂಸ್‌ಗಳು: ಅಪೂರ್ಣ ಲೂಜ್‌ಗಳು!
ವಿಮರ್ಶಕರ ರೇಟಿಂಗ್ :  
ಪಾತ್ರವರ್ಗ: ಶ್ರೀ ಮುರಳಿ, ಅಕುಲ್‌ ಬಾಲಾಜಿ, ಶ್ರೀಕಾಂತ್‌, ಐಶ್ವರ್ಯ ನಾಗ್‌, ರೇಖಾ, ಶ್ರಾವ್ಯ
ನಿರ್ದೇಶನ: ಅರುಣ್‌
ಓದುಗರ ರೇಟಿಂಗ್ :
ಕನ್ನಡ ಚಿತ್ರ: ಲೂಸ್‌ಗಳು

ಚಿತ್ರವೊಂದು ಇಷ್ಟವಾದರೆ, ಕೊನೆಯಲ್ಲಿ ಚಿತ್ರದ ಪಾತ್ರಗಳ ಮೇಲೆ ಪ್ರೀತಿ ಮೂಡುತ್ತದೆ. 'ಲೂಜ್‌ಗಳು' ಚಿತ್ರದ ನಂತರ ಅಲ್ಲಿನ ಪಾತ್ರಗಳು ಅನುಕಂಪಕ್ಕೆ ಪಾತ್ರವಾಗುತ್ತವೆ!

ಮೊಟ್ಟಮೊದಲನೆಯದಾಗಿ ನೇರ ಕತೆಯೊಂದನ್ನು ತೆರೆಗೆ ತಂದಿರುವ ನಿರ್ದೇಶಕ ಅರುಣ್ ಅವರನ್ನು ಅಭಿನಂದಿಸೋಣ. ಪ್ರತಿ ಫ್ರೇಮ್‌ನಲ್ಲೂ ತಾಜಾತನ ಇರಬೇಕೆನ್ನುವ ಅವರ ಇಂಗಿತವನ್ನೂ ಮೆಚ್ಚಬೇಕು. ಆದರೆ, ವೇಗದ ನಿರೂಪಣೆಗೆ ಮೊರೆ ಹೋಗಿರುವ ಅವರು ಚಿತ್ರದ ಸನ್ನಿವೇಶಗಳ ಹೆಣಿಗೆಯಲ್ಲಿ ವಿಫಲರಾಗಿದ್ದಾರೆ. ಇದರಿಂದ ಸ್ವತಃ ಅವರ ನಿರ್ದೇಶನವೂ ಸೇರಿದಂತೆ ಪಾತ್ರಗಳು ಕೂಡ ಅಸಹಾಯಕವಾಗುತ್ತವೆ.

ಅಪಕ್ವ ಮನಸ್ಸುಗಳೊಂದಿಗೆ ಬದುಕನ್ನು ಎದುರುಗೊಳ್ಳುವ ಮೂವರು ಯುವಕರ ಕಥೆಯಿದು. ಬ್ಯಾಂಕ್ ಲೂಟಿಯಿಂದ ಕೈವಶ ಮಾಡಿಕೊಳ್ಳುವ ಹಣ ಈ ಯುವಕರ ಭಾವ ಜಗತ್ತನ್ನು ಕದಡುತ್ತದೆ. ಅಲ್ಲಿಂದ ಮುಂದೆ ಯುವಕರ ಬದುಕಿನಲ್ಲಿ ಭೌತಿಕ ಸುಖ-ದುಃಖಗಳದ್ದೇ ಆಟ. ನಾಯಕನನ್ನು ವೈಭವೀಕರಿಸುವ ಚಿತ್ರಗಳ ಸಾಲಿನಲ್ಲಿ ಖಂಡಿತವಾಗಿ ಇದು ಅಪರೂಪದ ಪ್ರಯೋಗ. ಒಟ್ಟಾರೆ, ನವಯುಗದ ಪ್ರೇಕ್ಷಕರಿಗೆ ಇಷ್ಟವಾಗುವಂಥ ವಸ್ತುವನ್ನೇ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ನಿರೂಪಣೆಯಲ್ಲಿನ ಗೊಂದಲದಿಂದಾಗಿ ಒಳ್ಳೆಯ ಕಥೆಯೊಂದು ಸೊರಗಿರುವುದು ವಿಪರ್ಯಾಸ.

ಚಿತ್ರದ ನಾಯಕನನ್ನು ಹಾಡಿನೊಂದಿಗೇ ಪರಿಚಯಿಸಬೇಕೆನ್ನುವ ಹಠ ಏಕೋ? ಇದರಿಂದಾಗಿ ಅಪರೂಪದ ವಸ್ತುವಿಗೆ ಬೇಕಾದ ಓಪನಿಂಗ್‌ನಿಂದ ಸಿನಿಮಾ ವಂಚಿತವಾಗುತ್ತದೆ. ಆರಂಭದ ಅರ್ಧ ಗಂಟೆ ಕಳೆದರೂ ವೀಕ್ಷಕರ ಮನಸ್ಸಿನಲ್ಲಿ ಕಥೆಗೆ ಬೇಕಾದ ಮನೋಭೂಮಿಕೆ ರೂಪುಗೊಳ್ಳುವುದೇ ಇಲ್ಲ. ಯುವ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡ ನಿರ್ದೇಶಕರು, ಕೆಲವು ಬೋಲ್ಡ್ ದೃಶ್ಯಗಳನ್ನು ತೋರಿಸುತ್ತಾರೆ. ದೃಶ್ಯಗಳ ಹೆಣಿಗೆಯ ದೋಷದಿಂದಾಗಿ ಇವು ಪ್ರತ್ಯೇಕವಾಗಿ ನಿಲ್ಲುತ್ತವೆ! ನಮ್ಮಲ್ಲಿನ ಕೆಲವು ನಿರ್ದೇಶಕರು ಡಬಲ್ ಮೀನಿಂಗ್ ಸಂಭಾಷಣೆಯನ್ನು ಲೇಟೆಸ್ಟ್ ಟ್ರೆಂಡ್ ಎಂದೇ 'ಭಾವಿಸಿದ್ದಾರೆ'. ಅದೃಷ್ಟವತಾಶ್ ಈ ಚಿತ್ರದಲ್ಲಿ ಅಂಥ ಡೈಲಾಗ್‌ಗಳು ದೊಡ್ಡ ಸಂಖ್ಯೆಯಲ್ಲಿಲ್ಲ.

ಚಿತ್ರದಲ್ಲಿನ ಮೂರು ಜೋಡಿಗಳ ಪೈಕಿ ಶ್ರೀಕಾಂತ್ ಮತ್ತು ಶ್ರವ್ಯಾಗೆ ಹೆಚ್ಚು ಸ್ಕೋರ್ ಸಿಗುತ್ತದೆ. ಐಶ್ವರ್ಯ ನಾಗ್ ಮುದ್ದಾಗಿ ಕಾಣಿಸುತ್ತಾರೆ. ಸಂಗೀತ ನಿರ್ದೇಶಕಿ ವಾಣಿ ಹರಿಕೃಷ್ಣ ಅವರಿಗೆ ಇದು ಚೊಚ್ಚಲ ಸಿನಿಮಾ. ವೈವಿಧ್ಯ ಮಯ ಸಂಯೋಜನೆಗಳೊಂದಿಗೆ ಅವರು ಭರವಸೆ ಮೂಡಿಸು ತ್ತಾರೆ. ಛಾಯಾಗ್ರಾಹಕ ಚಿದಾನಂದ್‌ರ ಕ್ಲೋಸಪ್ ಶಾಟ್‌ಗಳು, ಟೈಟಲ್ ಕಾರ್ಡ್, ಪೋಸ್ಟರ್‌ಗಳ ವಿನ್ಯಾಸ ಸೂಪರ್. ಫ್ಲಾಶ್‌ಬ್ಯಾಕ್ ತಂತ್ರ ಗಳಲ್ಲಿ ನಿರ್ದೇಶಕರ ಕೈಚಳಕ ಎದ್ದು ಕಾಣುತ್ತದೆ. ಒಟ್ಟಾರೆ ಚಿತ್ರದಲ್ಲಿ ಮಿಸ್ ಆಗಿ ರು ವುದು 'ಬಂಧ'. ನಡುನಡುವೆ ಒಂದೆರೆಡು ಮಧುರ ಸಾಲು ಗಳಿದ್ದಾಕ್ಷಣ ಕವಿತೆಯೊಂದು ಪರಿಪೂರ್ಣವಾಗಲು ಹೇಗೆ ಸಾಧ್ಯ?

* ಶಶಿಧರ ಆರ್.
ಲೇಖನಕ್ಕೆ ಅನಿಸಿಕೆಗಳಿವೆ.ಬೇರೆ ಓದುಗರ ಅನಿಸಿಕೆಗಳನ್ನು ಓದಿಮತ್ತುನಿಮ್ಮ  ಅನಿಸಿಕೆಗಳನ್ನು ಬರೆಯಿರಿ.
ಇವುಗಳೂ ನಿಮಗಿಷ್ಟವಾಗಬಹುದು
 
ಇದನ್ನು ಟ್ವೀಟ್ ಮಾಡಿ.
About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768