Please enable javascript.ತೆಲಂಗಾಣ: ಹೊಸ ರಾಜ್ಯ ಬೇಡಿಕೆಗೆ ಹೊಸಜೀವ - ತೆಲಂಗಾಣ: ಹೊಸ ರಾಜ್ಯ ಬೇಡಿಕೆಗೆ ಹೊಸಜೀವ - Vijay Karnataka

ತೆಲಂಗಾಣ: ಹೊಸ ರಾಜ್ಯ ಬೇಡಿಕೆಗೆ ಹೊಸಜೀವ

ಏಜೆನ್ಸೀಸ್ | 2 Aug 2013, 4:00 am
Subscribe

ಪ್ರತ್ಯೇಕ ತೆಲಂಗಾಣ ರಾಜ್ಯ ಘೋಷಣೆಯಾಗುತ್ತಲೇ ದಶಕಗಳಿಂದ ಜೀವಂತವಿರುವ ಹೊಸ ರಾಜ್ಯದ ಬೇಡಿಕೆಗಳಿಗೆ ಆನೆಬಲ ಬಂದಂತಾಗಿದ್ದು, ಅಸ್ಸಾಂನಲ್ಲಿನ ಹಿಂಸಾಚಾರಕ್ಕೆ ಒಬ್ಬ ವಿದ್ಯಾರ್ಥಿ ಬಲಿಯಾಗಿದ್ದಾನೆ.

ತೆಲಂಗಾಣ: ಹೊಸ ರಾಜ್ಯ ಬೇಡಿಕೆಗೆ ಹೊಸಜೀವ
ದಿಪು: ಪ್ರತ್ಯೇಕ ತೆಲಂಗಾಣ ರಾಜ್ಯ ಘೋಷಣೆಯಾಗುತ್ತಲೇ ದಶಕಗಳಿಂದ ಜೀವಂತವಿರುವ ಹೊಸ ರಾಜ್ಯದ ಬೇಡಿಕೆಗಳಿಗೆ ಆನೆಬಲ ಬಂದಂತಾಗಿದ್ದು, ಅಸ್ಸಾಂನಲ್ಲಿನ ಹಿಂಸಾಚಾರಕ್ಕೆ ಒಬ್ಬ ವಿದ್ಯಾರ್ಥಿ ಬಲಿಯಾಗಿದ್ದಾನೆ.

ಅಸ್ಸಾಂನ ಕರ್ಬಿ ಅಂಗ್ಲೋಂಗ್ ಜಿಲ್ಲೆಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಗಾಯಗೊಂಡಿದ್ದ ವಿದ್ಯಾರ್ಥಿ ರಾಹುಲ್ ಸಿಂಗ್ನಾ ಬುಧವಾರ ತಡ ರಾತ್ರಿ ಅಸುನೀಗಿದ್ದಾನೆ.

ಹಿಂಸಾಚಾರಕ್ಕೆ ಇಳಿದಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಬುಧವಾರ ಗೋಲಿಬಾರ್ ನಡೆಸಿದ್ದರು. ಈ ಸಮಯದಲ್ಲಿ ಸಿಂಗ್ನಾ ಸೇರಿ 19 ಪ್ರತಿಭಟನಾಕಾರರು ಗಂಭೀರವಾಗಿ ಗಾಯಗೊಂಡಿದ್ದರು. ಸದರಿ ಜಿಲ್ಲೆಯಲ್ಲಿ ಸ್ಥಳೀಯ ಆಡಳಿತ ಅನಿರ್ದಿಷ್ಟಾವಧಿ ನಿಷೇಧಾಜ್ಞೆ ಜಾರಿ ಮಾಡಿದೆ. ಅಸ್ಸಾಂನಿಂದ ಬೋಡೊಲ್ಯಾಂಡ್ ಪ್ರದೇಶವನ್ನು ಪ್ರತ್ಯೇಕಿಸಿ ನೂತನ ರಾಜ್ಯ ಮಾಡುವಂತೆಯೂ ಬೇಡಿಕೆಯಿಟ್ಟು ನಡೆಯುತ್ತಿರುವ ಪ್ರತಿಭಟನೆಗಳೂ ತೀವ್ರಗೊಳ್ಳುತ್ತಿವೆ.

ಪ್ರತ್ಯೇಕ ಸ್ಥಾನಮಾನಕ್ಕೆ ಕೂಗು

ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಭಾಗವಾಗಿರುವ ಕಾರೈಕಲ್ ಪ್ರದೇಶಕ್ಕೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಬೇಕೆಂದು ‘ಕಾರೈಕಲ್ ಹೋರಾಟ ದಳ’ (ಕೆಎಸ್‌ಜಿ) ಆಗ್ರಹಿಸಿದೆ. ದೇಶಾದ್ಯಂತ ಹೊಸ ರಾಜ್ಯಗಳ ರಚನೆಯ ಕೂಗು ಬಲಗೊಂಡಿರುವ ಹಿನ್ನೆಲೆಯಲ್ಲಿ ಮತ್ತೊಂದು ‘ರಾಜ್ಯಗಳ ರಚನೆ ಆಯೋಗ’ವನ್ನು ತಕ್ಷಣವೇ ಸ್ಥಾಪನೆ ಮಾಡಬೇಕೆಂದೂ ಕೇಂದ್ರ ಸರಕಾರವನ್ನು ಕೆಎಸ್‌ಜಿ ಒತ್ತಾಯಿಸಿದೆ. ಪುದುಚೇರಿಯಿಂದ ಕಾರೈಕಲ್ ನೂರಾರು ಕಿ.ಮೀ. ಅಂತರದಲ್ಲಿದ್ದು, ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಪ್ರಗತಿಯಲ್ಲಿ ಹಿಂದುಳಿದಿದೆ. ಹೀಗಾಗಿ ಕಾರೈಕಲ್‌ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಆಗ್ರಹಿಸಿ 2005ರಿಂದಲೂ ಶಾಂತಿಯುತ ಸಂಪುಗಳು ನಡೆದಿವೆ. ಕಾರೈಕಲ್ ಸ್ಥಾನಮಾನಕ್ಕಾಗಿಯೇ ಕೆಎಸ್‌ಜಿ ಸಂಘಟನೆ 2005ರಲ್ಲೇ ಪ್ರಾರಂಭಗೊಂಡಿದೆ.

96 ಗಂಟೆಗಳ ಬಂದ್‌ಗೆ ಕರೆ

ಡಾರ್ಜಿಲಿಂಗ್: ಪಶ್ಚಿಮ ಬಂಗಾಳದಲ್ಲಿರುವ ಗೂರ್ಖಾಲ್ಯಾಂಡ್ ಪ್ರಾಂತ್ಯವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂದು ದಶಕಗಳಿಂದಲೂ ನಡೆಯುತ್ತಿರುವ ಹೋರಾಟ ತೆಲಂಗಾಣದ ಹಿನ್ನೆಲೆಯಲ್ಲಿ ಕಾವು ಪಡೆದುಕೊಂಡಿದ್ದು, ಈ ಪ್ರದೇಶದಲ್ಲಿ ಶನಿವಾರದಿಂದ 4 ದಿನಗಳ ಬಂದ್ ಆಚರಿಸುವಂತೆ ‘ಗೂರ್ಖಾ ಜನಮುಕ್ತಿ ಮೋರ್ಚಾ’ (ಜಿಜೆಎಂ) ಕರೆ ನೀಡಿದೆ. ಈಗಾಗಲೇ ಇಲ್ಲಿ ಬಂದ್ ಜಾರಿಯಲ್ಲಿದ್ದು, ಈದ್ ಹಬ್ಬದ ಹಿನ್ನೆಲೆಯಲ್ಲಿ ಶನಿವಾರದವರೆಗೂ ಹರತಾಳವನ್ನು ವಾಪಸ್ ಪಡೆಯಲಾಗಿದೆ. ಮೋರ್ಚಾದ ನಾಯಕರು ಶುಕ್ರವಾರ ದಿಲ್ಲಿಗೆ ತೆರಳಿ ಗೂರ್ಖಾಲ್ಯಾಂಡ್ ರಾಜ್ಯ ಘೋಷಣೆ ಮಾಡುವಂತೆ ಒತ್ತಡ ಹೇರುವುದಾಗಿಯೂ ಜಿಜೆಎಂ ವಕ್ತಾರ ರೋಷನ್ ಗಿರಿ ಹೇಳಿದ್ದಾರೆ. ‘‘ಗೂರ್ಖಾಲ್ಯಾಂಡ್ ಪ್ರಾಂತ್ಯದಲ್ಲಿ ಬಂದ್ ಹಾಗೂ ಧರಣಿ ಹಿಂಸಾಚಾರಕ್ಕೆ ತಿರುಗುವುದನ್ನು ತಪ್ಪಿಸಲು ಕೇಂದ್ರದಿಂದ ಸಿಬ್ಬಂದಿ ಕರೆಸಿಕೊಳ್ಳಲಾಗುತ್ತದೆ. ಜನತೆಯಲ್ಲಿ ಭಯ ಹೋಗಲಾಡಿಸುವ ದೃಷ್ಟಿಯಿಂದ ಡಾರ್ಜಿಲಿಂಗ್ ಸೇರಿದಂತೆ ಪ್ರಾಂತ್ಯದ ಪ್ರಮುಖ ಪಟ್ಟಣಗಳಲ್ಲಿ ಸ್ಥಳೀಯ ಪೊಲೀಸರು ಹಾಗೂ ಕೇಂದ್ರ ಪಡೆಗಳು ಗಸ್ತು ತಿರುಗಲಿವೆ,’’ ಎಂದು ಡಾರ್ಜಿಲಿಂಗ್ ಪೊಲೀಸ್ ಸೂಪರಿಂಟೆಂಡೆಂಟ್ ಕುನಾಲ್ ಅಗರ್‌ವಾಲ್ ಹೇಳಿದ್ದಾರೆ.

‘ಬೃಹತ್ ಜಾರ್ಖಂಡ್’ಗೆ ಬೇಡಿಕೆ

ಜೆಮ್‌ಶೆಡ್‌ಪುರ: ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಛತ್ತೀಸ್‌ಗಢ ರಾಜ್ಯಗಳಿಂದ ಕೆಲವು ಪ್ರಾಂತ್ಯಗಳನ್ನು ಕಸಿದು ಜಾರ್ಖಂಡ್‌ಗೆ ಸೇರಿಸುವ ಒತ್ತಾಯಕ್ಕೂ ತೆಲಂಗಾಣ ಸ್ಫೂರ್ತಿ ನೀಡಿದೆ. ‘‘ಬಂಗಾಳದ ಪುರುಲಿಯಾ, ಬಂಕುರಾ ಹಾಗೂ ಮಿಡ್ನಾಪುರ ಜಿಲ್ಲೆಗಳು, ಒಡಿಶಾದಿಂದ ಮಯೂರ್‌ಭಂಜ್, ಕಿಯೊನ್‌ಜರ್, ಸುಂದರ್‌ಗಢ ಹಾಗೂ ಸಬಲ್‌ಪುರ ಜಿಲ್ಲೆಗಳು, ಛತ್ತೀಸ್‌ಗಢದಿಂದ ಸರ್ಗುಜಾ ಹಾಗೂ ರಾಯ್‌ಗಢ ಜಿಲ್ಲೆಗಳನ್ನು ಪ್ರತ್ಯೇಕಿಸಿ, ಇವನ್ನು ಜಾರ್ಖಂಡ್ ರಾಜ್ಯಕ್ಕೆ ಸೇರಿಸಿ ‘ಬೃಹತ್ ಜಾರ್ಖಂಡ್’ ರಚನೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಆರಂಭಿಸಲಾಗುವುದು,’’ ಎಂದು ‘ಜಾರ್ಖಂಡ್ ಪೀಪಲ್ಸ್ ಪಾರ್ಟಿ’ (ಜೆಪಿಪಿ) ಅಧ್ಯಕ್ಷ ಸೂರ್ಯ ಸಿಂಗ್ ಬೆಸ್ರಾ ಹೇಳಿದ್ದಾರೆ. ಬಿಹಾರದಿಂದ 2000ನೇ ಇಸವಿಯಲ್ಲಿ ಸಿಡಿದು ರಚನೆಯಾದ ಜಾರ್ಖಂಡ್‌ನಲ್ಲಿನ ಬುಡಕಟ್ಟುಗಳ ಸಂಸ್ಕೃತಿ ಹಾಗೂ ಜನರು ಈ ಮೂರು ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿರುವುದರಿಂದ ಈ ಜಿಲ್ಲೆಗಳನ್ನು ಜಾರ್ಖಂಡ್‌ಗೆ ಸೇರಿಸಬೇಕೆಂದು ಕೆಲವು ವರ್ಷಗಳಿಂದ ಬೇಡಿಕೆಗಳು ಆರಂಭಗೊಂಡಿವೆ.

*ತೆಲಂಗಾಣವನ್ನು ಪ್ರತ್ಯೇಕ ರಾಜ್ಯವೆಂದು ಘೋಷಣೆ ಮಾಡಿರುವುದರಿಂದ ದೇಶದಲ್ಲಿ ಮತ್ತಷ್ಟು ಹೊಸರಾಜ್ಯಗಳಿಗಷ್ಟೇ ಅಲ್ಲ. ಹೊಸ ಜಿಲ್ಲೆಗಳಿಗೂ ಆಗ್ರಹ ನೂರ್ಮಡಿಯಾಗಲಿದೆ-ಅಣ್ಣಾ ಹಜಾರೆ, ಸಾಮಾಜಿಕ ಕಾರ್ಯಕರ್ತ

*ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ತೆಲಂಗಾಣ ವಿಚಾರದ ಕುರಿತು ಪ್ರತಿಪಕ್ಷಗಳು ಯಾವುದೇ ಪ್ರತಿರೋಧ ವ್ಯಕ್ತಪಡಿಸುವುದಿಲ್ಲ ಎಂದು ನಿರೀಕ್ಷಿಸುತ್ತೇನೆ-ದಿಗ್ವಿಜಯ್ ಸಿಂಗ್, ಆಂಧ್ರ ಕಾಂಗ್ರೆಸ್ ಉಸ್ತುವಾರಿ ನಾಯಕ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ