Please enable javascript.ಪಾಲಿಕೆ ವಿಷಯ ಸಭೆ ಕಾನೂನುಬಾಹಿರ? - ಪಾಲಿಕೆ ವಿಷಯ ಸಭೆ ಕಾನೂನುಬಾಹಿರ? - Vijay Karnataka

ಪಾಲಿಕೆ ವಿಷಯ ಸಭೆ ಕಾನೂನುಬಾಹಿರ?

ವಿಕ ಸುದ್ದಿಲೋಕ | 2 Aug 2013, 4:59 am
Subscribe

ಬಿಬಿಎಂಪಿಯಲ್ಲಿ ಆ.5ರಂದು ನಡೆಯಲಿರುವ ವಿಷಯ ಸಭೆಯಲ್ಲಿ ಕಡತ ಮಂಡನೆಗೆ ನಿರ್ಣಯ ಕೈಗೊಂಡಿರುವುದು ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಮೇಯರ್ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ಪಾಲಿಕೆ ವಿಷಯ ಸಭೆ ಕಾನೂನುಬಾಹಿರ?
-ಆ.5ರ ವಿಷಯ ಸಭೆ ಬಗ್ಗೆ ಗೊಂದಲ, ಮೇಯರ್-ಸಮಿತಿ ಅಧ್ಯಕ್ಷರ ನಡುವೆ ಭಿನ್ನಮತ-

ಬೆಂಗಳೂರು: ಬಿಬಿಎಂಪಿಯಲ್ಲಿ ಆ.5ರಂದು ನಡೆಯಲಿರುವ ವಿಷಯ ಸಭೆಯಲ್ಲಿ ಕಡತ ಮಂಡನೆಗೆ ನಿರ್ಣಯ ಕೈಗೊಂಡಿರುವುದು ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಮೇಯರ್ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ನೂತನ ಮೇಯರ್, ಉಪಮೇಯರ್ ಆಯ್ಕೆ ವಿಳಂಬದಿಂದಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ.

ಸ್ಥಾಯಿ ಸಮಿತಿ ಅನುಮೋದನೆಯಿಲ್ಲದೆ ಕೌನ್ಸಿಲ್ ಸಭೆಯಲ್ಲಿ ನೇರವಾಗಿ ಕಡತ ಮಂಡಿಸುವುದು ಕಾನೂನುಬಾಹಿರವಾಗಿದ್ದು, ಸಮಿತಿ ಮುಂದೆ ಕಡತ ಮಂಡನೆಗೆ ಅವಕಾಶ ನೀಡುವಂತೆ ಹಲವು ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು ಕೌನ್ಸಿಲ್ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಅವಧಿ ಮುಗಿದ ಬಳಿಕ ಮೇಯರ್ ವಿಷಯ ಸಭೆ ನಡೆಸಲು ಅವಕಾಶವಿದೆಯೇ ಎಂಬ ಬಗ್ಗೆ ಕೌನ್ಸಿಲ್ ವಿಭಾಗ ಕಳೆದ ಜೂನ್‌ನಲ್ಲಿ ಬರೆದ ಪತ್ರಕ್ಕೆ ನಗರಾಭಿವೃದ್ಧಿ ಇಲಾಖೆಯಿಂದ ಈವರೆಗೆ ಪ್ರತಿಕ್ರಿಯೆ ಬಂದಿಲ್ಲ. ಈ ನಡುವೆ ಅವಧಿ ಮುಗಿದ ಬಳಿಕ ಸ್ಥಾಯಿ ಸಮಿತಿಗಳಿಗೆ ಕಡತ ಪರಿಶೀಲನೆ ಅಧಿಕಾರವಿದೆಯೇ ಎಂಬ ಬಗ್ಗೆ ಜಿಜ್ಞಾಸೆ ಶುರುವಾಗಿದ್ದು, ಕೌನ್ಸಿಲ್ ವಿಭಾಗವು ಕಾನೂನು ನೆರವಿಗೆ ಮುಂದಾಗಿದೆ. ಇದೀಗ ವಿಷಯ ಸಭೆ ಕರೆದಿರುವುದು ಆಡಳಿತ ಪಕ್ಷದ ಸದಸ್ಯರಲ್ಲೇ ಭಿನ್ನಾಭಿಪ್ರಾಯ ಮೂಡಿದೆ.

ಕಳೆದ ಮಾರ್ಚ್‌ನಿಂದ ಈವರೆಗೆ ಪಾಲಿಕೆಯಲ್ಲಿ ವಿಷಯ ಸಭೆ ನಡೆದಿಲ್ಲ. ಮೇಯರ್ ಡಿ.ವೆಂಕಟೇಶಮೂರ್ತಿ ಅಧಿಕಾರಾವಧಿ ಏ.26ಕ್ಕೆ ಮುಕ್ತವಾಗಿದ್ದರಿಂದ ಸಾಮಾನ್ಯ ಸಭೆಯನ್ನಷ್ಟೇ ನಡೆಸಲಾಗುತ್ತಿತ್ತು. ಆದರೆ ಬುಧವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಆ.5ರಂದು ವಿಷಯ ಸಭೆ ನಡೆಸಲು ಒಪ್ಪಿಗೆ ನೀಡಿರುವುದಕ್ಕೆ ಹಲವು ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದೆ.

ಕಾನೂನುಬಾಹಿರ
ಸ್ಥಾಯಿ ಸಮಿತಿಗಳ ಅನುಮೋದನೆ ಇಲ್ಲದೆಯೇ ಕಡತಗಳನ್ನು ನೇರವಾಗಿ ವಿಷಯ ಸಭೆಗೆ ಮಂಡಿಸಲು ಮುಂದಾಗಿರುವುದು ಕಾನೂನುಬಾಹಿರ ಎಂದರೆ ತಪ್ಪಾಗಲಾರದು. ಒಂದು ವರ್ಷದ ಅಧಿಕಾರಾವಧಿ ಪೂರ್ಣಗೊಂಡ ಬಳಿಕವೂ ಹಾಲಿ ಮಹಾಪೌರರೇ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸ್ಥಾಯಿ ಸಮಿತಿಗಳಿಗೂ ಕರ್ತವ್ಯ ನಿರ್ವಹಿಸಲು ಅಧಿಕಾರವಿದ್ದು, ಎಲ್ಲ ಕಡತಗಳನ್ನು ಸಮಿತಿ ಮುಂದೆ ಮಂಡಿಸಲು ಆದೇಶ ನೀಡಬೇಕು ಎಂದು ಕೋರಿ ಹಲವು ಸ್ಥಾಯಿ ಸಮಿತಿ ಅಧ್ಯಕ್ಷರು ಕೌನ್ಸಿಲ್ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ನಗರ ಯೋಜನೆ, ಅಪೀಲು, ಲೆಕ್ಕಪತ್ರ, ಸಾಮಾಜಿಕ ನ್ಯಾಯ, ವಾರ್ಡ್ ಮಟ್ಟದ ಕಾಮಗಾರಿ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆ ಹಿನ್ನೆಲೆಯಲ್ಲಿ ಕೌನ್ಸಿಲ್ ವಿಭಾಗವು ಕಾನೂನು ಕೋಶದ ನೆರವು ಪಡೆಯಲು ಮುಂದಾಗಿದೆ.
***

ಸ್ಥಾಯಿ ಸಮಿತಿಗಳ ಅಧ್ಯಕ್ಷರು ಕಳೆದ ನಾಲ್ಕು ತಿಂಗಳಿನಿಂದ ನಗರದಲ್ಲಿ ಯಾವುದೇ ತಪಾಸಣೆ ನಡೆಸಿಲ್ಲ, ಕಡತ ಪರಿಶೀಲನೆ ಕೈಗೊಂಡಿಲ್ಲ. ಇಷ್ಟು ದಿನ ಸುಮ್ಮನಿದ್ದ ಅಧ್ಯಕ್ಷರು ವಿಷಯ ಸಭೆ ನಡೆಸಲು ಬುಧವಾರದ ಸಭೆಯಲ್ಲಿ ನಿರ್ಣಯ ಕೈಗೊಂಡ ನಂತರ ತಮಗೂ ಕಡತ ಪರಿಶೀಲನೆಗೆ ಅವಕಾಶ ನೀಡುವಂತೆ ಕೋರಿದ್ದಾರೆ. ಒಂದು ವರ್ಷ ಕಳೆದ ಬಳಿಕ ಸಮಿತಿಗಳಿಗೆ ಅಧಿಕಾರವಿರುವುದಿಲ್ಲ. ಒಂದೊಮ್ಮೆ ಕಾನೂನಿನಲ್ಲಿ ಅವಕಾಶವಿದ್ದರೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ.
-ಡಿ.ವೆಂಕಟೇಶಮೂರ್ತಿ, ಮೇಯರ್
***

ಕೌನ್ಸಿಲ್ ನಿರ್ಣಯದಂತೆ ಆ.5ರಂದು ವಿಷಯ ಸಭೆ ನಡೆಯಲಿದೆ. ಅವಧಿ ಮುಗಿದ ಬಳಿಕವೂ ಕಡತ ಪರಿಶೀಲನೆಗೆ ಸ್ಥಾಯಿ ಸಮಿತಿಗೆ ಅಧಿಕಾರವಿರುವ ಬಗ್ಗೆ ಸೂಕ್ತ ಕಾನೂನು ದಾಖಲೆ ನೀಡಿದರೆ ಅದರಂತೆ ಕ್ರಮ ಕೈಗೊಳ್ಳಲಾಗುವುದು. ಸ್ಥಾಯಿ ಸಮಿತಿ ಅಧ್ಯಕ್ಷರು ಕಚೇರಿ, ವಾಹನ ಇತರೆ ಸೇವೆ ಬಳಕೆ ಕುರಿತು ಚರ್ಚಿಸಲಾಗುವುದು. ಕಾನೂನಿನಂತೆ ಎಲ್ಲ ಕ್ರಮ ಕೈಗೊಳ್ಳಲಾಗುವುದು.
-ಎಂ.ಲಕ್ಷ್ಮೀನಾರಾಯಣ್, ಆಯುಕ್ತರು
***

ಅವಧಿ ಮುಗಿದರೂ ನೂತನ ಸದಸ್ಯರು ಆಯ್ಕೆಯಾಗುವವರೆಗೆ ಹಾಲಿ ಸ್ಥಾಯಿ ಸಮಿತಿ ಸದಸ್ಯರು ಅಧಿಕಾರದಲ್ಲಿ ಮುಂದುವರಿಯಲು ಕೆಎಂಸಿ ಕಾಯಿದೆಯಲ್ಲಿ ಅವಕಾಶವಿದೆ. ಹಾಗಿದ್ದರೂ ಸಮಿತಿಗಳ ಅನುಮೋದನೆ ಪಡೆಯದೆ ವಿಷಯ ಸಭೆಯಲ್ಲಿ ನೇರವಾಗಿ ಕಡತಗಳನ್ನು ಮಂಡಿಸುವುದು ಸರಿಯಲ್ಲ. ಸಮಿತಿ ಅಧ್ಯಕ್ಷರಿಗೆ ಅಧಿಕಾರವಿಲ್ಲದಿದ್ದರೆ ಕಚೇರಿ, ವಾಹನ ಸಿಬ್ಬಂದಿ ಸೇವೆ ಕೂಡ ಅಗತ್ಯವಿಲ್ಲ. ಹಾಗಾಗಿ ಈ ಸೇವೆಯನ್ನು ಹಿಂಪಡೆಯುವಂತೆ ಹಿಂದೆಯೇ ಪತ್ರ ಬರೆಯಲಾಗಿದೆ. ಸದ್ಯ ಕಾನೂನು ಅಭಿಪ್ರಾಯ ಕೋರಲಾಗಿದ್ದು, ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’.
-ವಿ.ವಾಗೀಶ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ