ADVERTISEMENT
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಆರೋಗ್ಯ-ಸೌಂದರ್ಯ » ಲೇಖನಗಳು

ಬೆಲ್ಸ್‌ ಪಾಲ್ಸಿಗೆ ಬಿಸಿಯೇ ಮದ್ದು

ಬೆಲ್ಸ್‌ ಪಾಲ್ಸಿಗೆ ಬಿಸಿಯೇ ಮದ್ದು
* ಡಾ. ಕರವೀರಪ್ರಭು ಕ್ಯಾಲಕೊಂಡ.

ದಿನಪೂರ್ತಿ ಜಿಟಿ ಜಿಟಿ ಮಳೆ, ತಂಪು ಹವೆಯಲ್ಲಿ ಪ್ರವಾಸ ಮಾಡಿದವ ಮರುದಿನ ಆಫೀಸ್‌ಗೆ ಹೋದವ ತಂಪಿನ ಎಸಿಯಲ್ಲಿ ಮುಳುಗಿ ಹೋದ. ಕೆಲಸ ಮುಗಿಸಿ ಮನೆಗೆ ಹೋಗುವಾಗಲೂ ಕಿವಿಗೆ ತಂಪು ಗಾಳಿ ಬಡಿಯುತ್ತಿತ್ತು. ರಾತ್ರಿ ಮನೆಗೆ ಬಂದಾಗ ಬಲಕಿವಿಯ ಹಿಂದೆ ಏಕೋ ನೋಯುತ್ತಿದೆ ಅಂದ. ಒದ್ದಾಡುತ್ತ ನಿದ್ದೆ ಮಾಡಿದ. ಬೆಳಗಿನ ಸಕ್ಕರೆಯ ನಿದ್ದೆ ಸವಿಯುತ್ತಿದ್ದ. ಎದ್ದಾಗ ಗಂಟೆ ಎಂಟು. ಮುಖ ತೊಳೆದುಕೊಂಡ. ಕಣ್ಣು ಉರಿಯುತ್ತಿತ್ತು. ಸೋಪಿನ ನೀರು ಕಣ್ಣಲ್ಲಿ ಹೊಯ್ತೆನೋ ಎಂದು ಎದುರಿನ ಕನ್ನಡಿಯಲ್ಲಿ ದಿಟ್ಟಿಸಿ ನೋಡಿದ.ಅಚ್ಚರಿ ಕಾದಿತ್ತು!

ಅವನ ಬಲಗಣ್ಣು ತೆರೆದಿತ್ತು ಎಷ್ಟು ಪ್ರಯತ್ನಿಸಿದರೂ ಮುಚ್ಚಲು ಆಗಲಿಲ್ಲ. ಬಾಯಿ ಸೊಟ್ಟಗಾಗಿತ್ತು. ಬಲ ಹುಬ್ಬನ್ನು ಏರಿಸಲು ಸಾಧ್ಯವಾಗಲಿಲ್ಲ . ಹಣೆಯ ಮೇಲಿನ ಗೆರೆಗಳು ಮಾಯವಾಗಿದ್ದವು. ಬಾಯಿಯಲ್ಲಿ ನೀರು ಹಾಕಿ ಕೊಂಡು ಮುಕ್ಕಳಿಸ ಬೇಕೆಂದರೆ ಕಟಬಾಯಿಯಿಂದ ನೀರುಸೋರ ಹತ್ತಿತು ಗಲ್ಲ ಉಬ್ಬಿಸಲು ಬರಲಿಲ್ಲ. ಆತ ಬೆಲ್ಸಪಾಲ್ಸಿಗೆ ಒಳಗಾಗಿದ್ದ.

ಬೆಲ್ಸ ಪಾಲ್ಸಿ

ಮುಖದ ಅಂದಗೆಡಿಸುವ ಕಾಯಿಲೆ ಇದು. ಲಿಂಗಭೇದದ ತಾರತಮ್ಯ ಈ ರೋಗಕ್ಕಿಲ್ಲವಾದರೂ, ಹೆಣ್ಣುಮಕ್ಕಳಲ್ಲಿ ಇದರ ಹಾವಳಿ ಹೆಚ್ಚು. ಎಲ್ಲ ವಯಸ್ಸಿನವರಲ್ಲೂ ಇದು ಕಾಣಿಸಿಕೊಳ್ಳುತ್ತದೆ. ವರ್ಷದುದ್ದಕ್ಕೂ ಇದರ ಕಾಟ ಕಂಡುಬಂದರೂ, ಚಳಿಗಾಲದಲ್ಲಿ ಇದರ ಉಪಟಳ ಜಾಸ್ತಿ. ಇದಕ್ಕೆ ನಿಶ್ಚಿತ ಕಾರಣ ಗೊತ್ತಾಗಿಲ್ಲ. ಅತಿಯಾದ ಶೀತಕ್ಕೆ ದೇಹವನ್ನು ಒಡ್ಡಿದಾಗ, ಕಿವಿಯಲ್ಲಿ ಸೋಂಕು ಉಂಟಾದಾಗ, ಕಿವಿ ಸೋರುತ್ತಿದ್ದಾಗ, ವೈರಸ್ ಸೋಂಕುಗಳಾದ ಹರ್ಪಿಸ್ ಸಿಂಪ್ಲೆಕ್ಸ, ಹರ್ಪಿಸ್ ಜೋಸ್ಟರ್ ಮುತ್ತಿಗೆ ಹಾಕಿದಾಗ, ತಲೆಗೆ ಏಟು ಬಿದ್ದಾಗ ಬೆಲ್ಸ ಪಾಲ್ಸಿ ಉಂಟಾಗಬಹುದು. ಸಕ್ಕರೆ ಕಾಯಿಲೆ, ರಕ್ತದ ಒತ್ತಡ ತೀವ್ರವಾದಾಗ ಹಾಗೂ ಗರ್ಭಿಣಿಯರಲ್ಲಿ ಕೊನೆಯ ತಿಂಗಳುಗಳಲ್ಲಿ ಹಲ್ಲಿಗೆ ಅರಿವಳಿ ೆಕೊಟ್ಟಾಗ ಸಹ ಇದು ಉಂಟಾಗಬಹುದು. ಇವು ವೈದ್ಯಕೀಯ ವಿಜ್ಞಾನ ಇಲ್ಲಿಯವರೆಗೆ ಬೆಲ್ಸ ಪಾಲ್ಸಿಉಂಟಾಗಲು ಗುರುತಿಸಿರುವ ಕಾರಣಗಳು.

ಮುಖಕ್ಕೆ ಅರಿವಿನ ಜ್ಞಾನವನ್ನು ಒದಗಿಸುವ ಫೇಶಿಯಲ್ ನರ್ವ್ (ಈಛಿಚಿಟ ಓಡಿ) ಒಂದು ಭಾಗದಲ್ಲಿ ಬಾವು ಬಂದು ಊತ ಕಾಣಿಸಿಕೊಳ್ಳುವುದು. ಇದು ಸಾಮಾನ್ಯವಾಗಿ ಇಕ್ಕಟ್ಟಾದ ಫೇಶಿಯಲ್ ಕೆನಾಲ್ ಮುಖಾಂತರ ಹೊರಬರುವಾಗ ಸ್ಥಳೀಯವಾಗಿ ಅರವಳಿಕೆಯಾದಂತಾಗಿ ಸಂವೇದನೆಗಳ ಸರಬರಾಜು ಸ್ಥಗಿತಗೊಳ್ಳುತ್ತದೆ. ಕೆಲವೊಮ್ಮೆ ಮುಂದಿನ ನರತಂತುಗಳು ನಾಶವಾಗುವವು.

ಮುಖದ ಲಕ್ವ ಲಕ್ಷಣಗಳು ಕಾಣಿಸುವ ಪೂರ್ವದಲ್ಲಿ ಕಿವಿಯಲ್ಲಿ ನೋವು ಕಾಣಿಸುವುದು ಬೆಲ್ಸ ಪಾಲ್ಸಿಯ ಮುನ್ಸೂಚನೆ.

ಲಕ್ಷಣ

ಮುಖದ ಹಾವಭಾವ ತೋರ‌್ಪಡಿಸುವಲ್ಲಿ ಬೇಕಾಗುವ ಮಾಂಸಖಂಡಗಳು ಲಕ್ವದ ಹೊಡೆತಕ್ಕೆ ತುತ್ತಾಗುತ್ತವೆ. ಬಾಯಿ ಲಕ್ವ ಹೊಡೆದ ವಿರುದ್ಧ ದಿಕ್ಕಿಗೆ ವಾಲಿಕೊಂಡಿದ್ದು ಕಟಬಾಯಿಯಿಂದ ಜೊಲ್ಲು ಸೋರಬಹುದು. ನೀರು ಕುಡಿಯುವಾಗ ಆ ಕಡೆಯಿಂದ ನೀರು ಹೊರಬರುವುದು.

ಹಣೆಯ ಮೇಲಿನ ನಿರಿಗೆಗಳು (ಞಟಿ ಅಡಿಚಿ**) ಮಾಯವಾಗುವವು. ಲಕ್ವ ಹೊಡೆದ ಕಡೆ ಹುಬ್ಬು ಏರಿಸಲು ಬರುವುದಿಲ್ಲ. ಕಣ್ಣನ್ನು ಪೂರ್ತಿಯಾಗಿ ಗಟ್ಟಿಯಾಗಿ ಮುಚ್ಚಲು ಸಾಧ್ಯವಾಗುವುದಿಲ್ಲ. ಮೂಗಿನ ಹೊರಳೆಗಳ ಚಲನವಲನ ಆಗುವುದಿಲ್ಲ. ಮುಖದ ಮೇಲಿನ ಚರ್ಮದ ನೀರಿಗೆಗಳು ಮಾಯವಾಗಿ ಸಪಾಟಾಗಿ ವಿಲಕ್ಷಣ ಕಾಣಿಸುತ್ತದೆ.

ರೋಗಿಗಳಿಗೆ ಹಲ್ಲು ತೋರಿಸಲು ಹೇಳಿದಾಗ, ಕಟಬಾಯಿ ಲಕ್ವ ಹೊಡೆದ ವಿರುದ್ಧ ಬದಿಗೆ ವಾಲುವುದು. ಕಣ್ಣಿನ ರೆಪ್ಪೆಗಳಿಂದ ಬಿಗಿಯಾಗಿ ಕಣ್ಣು ಮುಚ್ಚಲು ಪ್ರಯತ್ನಪಟ್ಟಾಗ, ಲಕ್ವ ಹೊಡೆದ ಭಾಗದ ಕಣ್ಣಿನ ಗುಡ್ಡೆ ಮೇಲಕ್ಕೆ ತಿರುಗುವುದು. ಇದಕ್ಕೆ ಬೆಲ್ಸಪೆನಾಮಿನಾ'ಎನ್ನುವರು. ಮಲಗುವಾಗ ಕಣ್ಣುಪೂರ್ತಿ ಮುಚ್ಚಿಕೊಳ್ಳಲು ಆಗುವುದಿಲ್ಲವಾದ್ದರಿಂದ ತೆರೆದ ಭಾಗದ ಕಾರ್ನಿಯಾ ಒಣಗಿದಂತಾಗಿ ಅಲ್ಲಿ ಕಾರ್ನಿಯಾ ಹುಣ್ಣು' ಕಾಣಿಸಕೊಳ್ಳಬಹುದು. ಆದ್ದರಿಂದ ಕಣ್ಣಿನ ಬಗ್ಗೆ ಕಾಳಜಿ ವಹಿಸುವುದು ಅವಶ್ಯ. ಆಹಾರವನ್ನು ಅಗಿಯುವಾಗ ಬೆಲ್ಸ ಪಾಲ್ಸಿ ಆದ ಕಡೆ ವಸಡು ಮತ್ತು ಗಲ್ಲದ ನಡುವೆ ನುರಿತ ಆಹಾರ ಶೇಖರಗೊಳ್ಳುತ್ತದೆ. ಕೆಲವೊಮ್ಮೆ ದವಡೆ ಮೂಳೆಯ ಕೋನದಲ್ಲಿ ನೋವು ಕಾಣಿಸಿಕೊಳ್ಳಬಹುದು. ರೋಗಿಗೆ ತುಟಿಯನ್ನು ಕೂಡಿಸಿ ಊದುವುದಾಗಲೀ, ಸಿಳ್ಳು ಹಾಕುವುದಾಗಲೀ ಆಗುವುದಿಲ್ಲ.

ಬೆಲ್ಸ ಪಾಲ್ಸಿಯನ್ನು ಅದು ತೋರ‌್ಪಡಿಸುವ ಗುಣಲಕ್ಷಣಗಳಿಂದಲೇ ರೋಗ ನಿಧಾನ ಮಾಡಬಹುದು. ಇದನ್ನು ಖಚಿತಪಡಿಸುವ ನಿರ್ದಿಷ್ಠ ಪರೀಕ್ಷೆಗಳು ಲಭ್ಯವಿಲ್ಲ. ಇಲೆಕ್ಟ್ರೋಮಯೋಗ್ರಾಫಿ (ಇಒಉ) ಪರೀಕ್ಷೆ ಮಾಡುವುದರಿಂದ ರೋಗದ ಮುನ್ನೋಟ ತಿಳಿಯಲು ಸಾಧ್ಯವಾಗುವುದು. ಮೆದುಳಿನ ಸಿಟ ಎಂ. ಆರ್.ಐ. ಅಪರೂಪಕ್ಕೆ ಮಾಡಿಸಬೇಕಾಗುವುದು.

ಚಿಕಿತ್ಸೆ

ಬೆಲ್ಸ ಪಾಲ್ಸಿ ಕಾಣಿಸಿಕೊಂಡಾಗ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲದಿದ್ದರೆ ವಿಕಾರದ ಲಕ್ಷಣಗಳು ಹೆಚ್ಚುತ್ತವೆ. ವಿಕಾರಗೊಂಡ ಭಾಗಕ್ಕೆ ಇನ್‌ಫ್ರಾರೆಡ್ ರೇಡಿಯೇಶನ್, ಕಾರ‌್ಟವೇವ್ ಡಯಾಥರ್ಮಿ ಅಥವಾ ಮೊಯಿಸ್ಟ್ ಹೀಟ್ ಥೆರಪಿ ಸಹಾಯಕವಾಗುವವು. 'ಇಲೆಕ್ಟ್ರಿಕಲ್ ವೈಬ್ರೇಶನ್ ಥೆರಪಿ ಇಲೆಕ್ಟ್ರಿಕಲ್ ಸ್ಟಿಮ್ಯುಲೇಶನ್ ಥೆರಪಿ'ರೋಗ ಗುಣಮುಖವಾಗುವುದನ್ನು ತ್ವರಿತಗೊಳಿಸುವವು. ನರತಂತುಗಳು, ನರಗಳು ಮೊದಲಿನಂತೆ ಕಾರ್ಯನಿರ್ವಹಿಸುವ ಸಲುವಾಗಿ ಈ ಪುನಶ್ಚೇತನ ಚಿಕಿತ್ಸೆ ಉಪಯುಕ್ತ. ರೋಗಿಯ ಮುಖವನ್ನು ಎಣ್ಣೆಯಿಂದ (ಎಳ್ಳೆಣ್ಣೆ ಉತ್ತಮ) ದಿನಕ್ಕೆರಡು ಬಾರಿ ಕನಿಷ್ಠ ಐದು ನಿಮಿಷ ಮಸಾಜ್ ಮಾಡಿಕೊಂಡರೆ ಉತ್ತಮ. ಕಣ್ಣುಗಳನ್ನು ಸರಿಯಾಗಿ ಮುಚ್ಚಲು ಆಗದಿದ್ದಾಗ, ಮಲಗುವ ವೇಳೆ ಕಣ್ಣಿನ ಮೇಲೆ ಪ್ಯಾಡ್ ಇಟ್ಟು ಮಲಗಬೇಕು. ಇಲ್ಲವೇ ಅಂಟುಪಟ್ಟಿ ಹಚ್ಚಿಕೊಂಡು ಮಲಗಬೇಕು.

ಗುಣವಾದ ಮೇಲೆ ಮುಖದ ಪ್ರತಿಯೊಂದು ಕ್ರಿಯೆಯನ್ನು (ಊದುವುದು, ಕಣ್ಣು ರೆಪೆಗಳನ್ನು ಗಟ್ಟಿಯಾಗಿ ಮುಚ್ಚುವುದು, ತೆರೆಯುವುದು, ಹುಬ್ಬು ಏರಿಸುವುದು ಮತ್ತು ಇಳಿಸುವುದು, ಬೆಲ್ಸ ಪಾಲ್ಸಿ ಆದ ಕಡೆ ಚೂಯಿಂಗ್‌ಗಮ್ ಅಗಿಯುವುದು, ಸಿಳ್ಳು ಹಾಕುವುದು, ಪುಗ್ಗಾ ಊದುವುದು....... ಇತ್ಯಾದಿಗಳನ್ನು) ಕನ್ನಡಿಯಲ್ಲಿ ನೋಡಿಕೊಂಡು ಮಾಡುವುದು.

ಕಿವಿಗೆ ತಂಪು ತಗಲದಂತೆ ಕಿವಿಯಲ್ಲಿ ಅರಳೆ ಇಟ್ಟುಕೊಳ್ಳಬೇಕು. ಉಣ್ಣೆಯ ಟೋಪಿಯನ್ನು ಕಿವಿ ಮುಚ್ಚುವ ಹಾಗೆ ಧರಿಸಬೇಕು. ಇಲ್ಲವೆ ಈಗ ತಂಪಿನಿಂದ ರಕ್ಷಿಸುವ ಪರಿಕರಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳನ್ನು ಬಳಸಲು ಮರೆಯಬಾರದು.

ಹೆಚ್ಚಿನ ಪ್ರಕರಣಗಳಲ್ಲಿ, ಒಂದೆರಡು ತಿಂಗಳುಗಳ ಅವಧಿಯಲ್ಲಿ ಸ್ನಾಯುಗಳು ಮೊದಲಿನ ಸ್ಥಿತಿಗೆ ಮರಳುತ್ತವೆ. ಯಾವ ನ್ಯೂನ್ಯತೆಯೂ ಉಳಿಯುವುದಿಲ್ಲ. ಆದರೆ ಕೆಲವರಲ್ಲಿ ಪೂರ್ಣ ಗುಣ ಕಾಣದೆ, ಸ್ವಲ್ಪಮಟ್ಟಿನ ನ್ಯೂನ್ಯತೆ ಉಳಿಯುತ್ತದೆ.
ಲೇಖನಕ್ಕೆ ಅನಿಸಿಕೆಗಳಿವೆ.ಬೇರೆ ಓದುಗರ ಅನಿಸಿಕೆಗಳನ್ನು ಓದಿಮತ್ತುನಿಮ್ಮ  ಅನಿಸಿಕೆಗಳನ್ನು ಬರೆಯಿರಿ.
ಇವುಗಳೂ ನಿಮಗಿಷ್ಟವಾಗಬಹುದು
 
ಇದನ್ನು ಟ್ವೀಟ್ ಮಾಡಿ
About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768