Please enable javascript.ಸಂಪೂರ್ಣ ತ್ಯಾಗ ಬೇಡ ಮಕ್ಕಳೇ ಪಾಠ ಕಲಿಯಲಿ - ಸಂಪೂರ್ಣ ತ್ಯಾಗ ಬೇಡ ಮಕ್ಕಳೇ ಪಾಠ ಕಲಿಯಲಿ - Vijay Karnataka

ಸಂಪೂರ್ಣ ತ್ಯಾಗ ಬೇಡ ಮಕ್ಕಳೇ ಪಾಠ ಕಲಿಯಲಿ

Vijaya Karnataka Web | 28 Jul 2013, 4:52 am
Subscribe

‘ನನಗಂತೂ ಅವೆಲ್ಲಾ ಸಿಗಲಿಲ್ಲ.... ಎಷ್ಟೇ ಕಷ್ಟವಾದರೂ ಪರವಾಗಿಲ್ಲ, ಮಕ್ಕಳು ಕೇಳಿದ್ದನ್ನು ಕೊಡಿಸೋಣ’

ಸಂಪೂರ್ಣ ತ್ಯಾಗ ಬೇಡ ಮಕ್ಕಳೇ ಪಾಠ ಕಲಿಯಲಿ
* ಡಾ. ಕೆ ಎಸ್ ಚೈತ್ರಾ

‘ನನಗಂತೂ ಅವೆಲ್ಲಾ ಸಿಗಲಿಲ್ಲ.... ಎಷ್ಟೇ ಕಷ್ಟವಾದರೂ ಪರವಾಗಿಲ್ಲ, ಮಕ್ಕಳು ಕೇಳಿದ್ದನ್ನು ಕೊಡಿಸೋಣ’
‘ನಮಗೆ ಇಲ್ಲದಿದ್ದರೂ ಪರವಾಗಿಲ್ಲ. ಮಕ್ಕಳಿಗೆ ಅದು ಗೊತ್ತಾಗದಂತೆ ಅವರ ಆಸೆಗಳನ್ನು ಪೂರೈಸೋಣ’

ಇದು ಸಾಮಾನ್ಯವಾಗಿ ಮಧ್ಯಮ ವರ್ಗದ ಕುಟುಂಬಗಳ ಪೋಷಕರ ಅಭಿಪ್ರಾಯ. ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕು, ತಾವು ಪಟ್ಟ ಕಷ್ಟಕೋಟಲೆಗಳು ಮಕ್ಕಳಿಗೆ ಬರಬಾರದೆಂಬ ಉದ್ದೇಶದಿಂದ ಅವರು ಕೇಳಿದ್ದನ್ನೆಲ್ಲಾ ಕೊಡಿಸುವ ತ್ಯಾಗಮಯಿ ತಂದೆ-ತಾಯಿಯರು ಸಾವಿರಾರು. ಹೊಟ್ಟೆ ಬಟ್ಟೆ ಕಟ್ಟಿ ಲಕ್ಷಾಂತರ ರೂಪಾಯಿ ಸಾಲಸೋಲ ಮಾಡಿ ಹೇಗಾದರೂ ಮಕ್ಕಳನ್ನು ಸದಾ ಸಂತೋಷದಲ್ಲಿಡುವ ಪ್ರಯತ್ನ ಪೋಷಕರದು. ಆದರಿದು ಸರಿಯೇ?

ಮಕ್ಕಳ ಹಿತ ಕಾಪಾಡುವುದು, ಅವರ ಅಗತ್ಯಗಳನ್ನು ಪೂರೈಸುವುದು ಮತ್ತು ಉತ್ತಮ ಭವಿಷ್ಯಕ್ಕಾಗಿ ಚಿಂತಿಸುವುದು ಪಾಲಕರ ಕರ್ತವ್ಯ. ಹಾಗೆಂದು ಮಕ್ಕಳ ಎಲ್ಲಾ ಆಸೆಗಳನ್ನು ಸ್ವಂತ ಸುಖ-ಅನುಕೂಲ ತ್ಯಾಗ ಮಾಡಿ ಪೂರೈಸುವ ಅಗತ್ಯ ಖಂಡಿತಾ ಇಲ್ಲ. ಮಕ್ಕಳ ಮನಸ್ಸು ಚಂಚಲವಾದುದು. ಅವರ ಅರಿವಿನ ಕ್ಷೇತ್ರವೂ ಸೀಮಿತವಾದುದು. ವಾಸ್ತವ ಜಗತ್ತಿನ ಅರಿವು ಅವರಿಗಿರುವುದಿಲ್ಲ. ಹಾಗಾಗಿಯೇ ‘ಟಿ.ವಿ.ಯಲ್ಲಿ ಬಂದದ್ದೆಲ್ಲಾ ಕೊಡಿಸು’, ‘ಪಕ್ಕದ ಮನೆ ಹುಡುಗನ ತರದ್ದೇ ಬಟ್ಟೆ ಬೇಕು’, ‘ನಾನೂ ಕಾರಿನಲ್ಲಿ ಓಡಾಡಬೇಕು’ ಎಂಬ ಮಕ್ಕಳ ಬೇಡಿಕೆಗಳು ಅತ್ಯಂತ ಸಹಜ.

ಇಂಥ ಸಂದರ್ಭಗಳಲ್ಲಿ ತಂದೆ-ತಾಯಿಯರ ವರ್ತನೆ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಬಾಲ್ಯದಿಂದಲೇ ನಿಧಾನವಾಗಿ ಮಕ್ಕಳಿಗೆ ವಾಸ್ತವಿಕತೆಯ ಅರಿವು ಮೂಡಿಸಬೇಕು. ಸಮಯ-ಸಂದರ್ಭ ನೋಡದೇ ಸದಾ ತ್ಯಾಗಮಯಿಗಳಾಗಿ ಮಕ್ಕಳನ್ನು ಭ್ರಮಾಲೋಕದಲ್ಲಿ ಇಟ್ಟರೆ ಅದರಿಂದ ಮಕ್ಕಳ ಆಸೆ -ಬೇಡಿಕೆಗಳು ತಣಿಯುವುದಿಲ್ಲ. ‘ನಾನು ಕೇಳಿದ್ದೆಲ್ಲಾ ಸಿಗುತ್ತದೆ’ ಎಂಬ ಮನೋಭಾವ ಬೆಳೆದು, ಅದೇ ಬಲವಾಗಿ ಬೇರೂರುತ್ತದೆ. ‘ಯಾರಿಗೆ ಏನಾದರೂ ಸರಿ, ನನ್ನ ಆಸೆ ಮುಖ್ಯ’ ಎಂದು ಭಾವಿಸುವ ಮಕ್ಕಳು ಬೇರೆಯವರ ಭಾವನೆಗಳನ್ನು, ಕಷ್ಟಗಳನ್ನು ನಿರ್ಲಕ್ಷಿಸುವಷ್ಟು ಸ್ವಾರ್ಥಿಗಳಾಗುತ್ತಾರೆ. ತಂದೆ-ತಾಯಿ ಇರುವುದೇ ತಮಗಾಗಿ ಎಂಬ ಧೋರಣೆ ಬೆಳೆಸಿಕೊಳ್ಳುತ್ತಾರೆ.

ಇದರ ಇನ್ನೊಂದು ಪರಿಣಾಮ ಮಕ್ಕಳಿಗೆ ಏನನ್ನಾದರೂ ಮಾಡಲು, ಪಡೆಯಲು ಆಸೆಯೇ ಇಲ್ಲದಿರುವುದು. ಬಯಸಿದ್ದೆಲ್ಲಾ ಬಾಯಿಂದ ಹೊರಬಿದ್ದ ಕೂಡಲೇ ತಂದೆ-ತಾಯಿ ಬೇರೆಲ್ಲವನ್ನೂ ಬದಿಗಿಟ್ಟು ಅದನ್ನು ಪೂರೈಸಿದರೆ ಮಕ್ಕಳಿಗೆ ಇನ್ನೇನು ಆಸೆ ಉಳಿದೀತು? ಕಷ್ಟಪಡಲು, ಮಹತ್ತರವಾದುದನ್ನು ಸಾಧಿಸಲು ಪ್ರೇರಣೆಯಾದರೂ ಏನು? ಹಾಗೆಯೇ ಸಿಕ್ಕ ವಸ್ತುಗಳಿಗೆ ಸಂತೋಷಪಡುವ ಗುಣವೂ ಮಕ್ಕಳಲ್ಲಿ ಇಲ್ಲವಾಗುತ್ತದೆ. ಎಲ್ಲದರಲ್ಲೂ ಒಂದು ರೀತಿಯ ನಿರ್ಲಿಪ್ತತೆ, ಮಹತ್ತ್ವಾಕಾಂಕ್ಷೆಯ ಕೊರತೆ ಮಕ್ಕಳಲ್ಲಿ ಕಾಣುವ ಸಾಧ್ಯತೆ ಇದೆ.

ಹಾಗೆಯೇ ಹೇಗಾದರೂ ಮಾಡಿ ಮಕ್ಕಳ ಎಲ್ಲಾ ಆಸೆ ಪೂರೈಸುವ ಭರದಲ್ಲಿ ಪೋಷಕರು ಅವರನ್ನು ‘ನಿರಾಶೆಯ ಸಂದರ್ಭವನ್ನು’ ಎದುರಿಸಲು ಮಾನಸಿಕವಾಗಿ ಅಸಮರ್ಥರಾಗಿಸುತ್ತಾರೆ. ಬಾಲ್ಯದಲ್ಲಿ ಇದು ಸಮಸ್ಯೆಯಾಗಿ ಕಾಡದಿದ್ದರೂ ಹೊರಜಗತ್ತಿನ ಸಂಪರ್ಕಕ್ಕೆ ಮಕ್ಕಳು ಬಂದಂತೆಲ್ಲಾ ಗಂಭೀರ ಸಮಸ್ಯೆಯಾಗುತ್ತದೆ. ಜೀವನದಲ್ಲಿ ಆಸೆ-ನಿರಾಸೆ ಎರಡನ್ನೂ ಮಕ್ಕಳು ಅರಿಯವಲ್ಲಿ ಪೋಷಕರ ಪಾತ್ರ ಹಿರಿದು.

ಮಕ್ಕಳ ಮೇಲಿನ ಪ್ರೀತಿ, ಚೆನ್ನಾಗಿ ಬೆಳೆಸಬೇಕು ಎಂಬ ದೃಷ್ಟಿಯಿಂದ ಅವರು ಕೇಳಿದ್ದನ್ನೆಲ್ಲಾ ಕೊಡಿಸುವುದು ಸರಿಯಲ್ಲ. ತಮ್ಮ ಆಸೆಗಳು ಪೂರ್ಣವಾಗದೇ ಇದ್ದಾಗ ಮಕ್ಕಳು ಅಳಬಹುದು, ಹಠ ಮಾಡಬಹುದು, ಸಿಟ್ಟಾಗಬಹುದು. ಅದಕ್ಕೆ ಬಗ್ಗದೆ, ಸರಿಯಾದ ತಿಳಿವಳಿಕೆ ನೀಡುವುದು ಸೂಕ್ತ. ಕೇಳಿದ್ದನ್ನೆಲ್ಲ ಕೊಡಿಸುವುದರ ಬದಲು ತಮ್ಮ ಇತಿಮಿತಿಗಳಲ್ಲಿ ಸಾಧ್ಯವಿರುವ, ವಯಸ್ಸಿಗೆ ಸಹಜವಾದ ಆಸೆಯನ್ನು ಪೂರೈಸಬಹುದು. ಹಾಗಂತ ಮಕ್ಕಳು ಏನನ್ನಾದರೂ ಅಸೆಪಟ್ಟು ಕೇಳಿದಾಗ ಬೈದು, ಹೊಡೆಯಬೇಕೆಂದಿಲ್ಲ. ಅದನ್ನು ಪರಿಶೀಲಿಸಿ, ಮಕ್ಕಳೊಂದಿಗೆ ಚರ್ಚಿಸಿ ಯಾಕೆ ಸಾಧ್ಯವಿಲ್ಲ ಮತ್ತು ಹೇಗೆ ಸಾಧ್ಯವಾಗಿಸಬಹುದು ಎಂಬುದನ್ನು ವಿವರಿಸಬೇಕು.

ಮನೆಯಲ್ಲಿನ ವಾತಾವರಣ, ಪೋಷಕರ ಮನೋಭಾವ ಮಕ್ಕಳ ಇಡೀ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅತ್ಯಂತ ಮುಖ್ಯವಾಗುತ್ತದೆ. ಆರಂಭದಿಂದಲೇ ಸರಿಯಾಗಿ ಬೆಳೆಸಿದಲ್ಲಿ ಮಕ್ಕಳಿಗೆ ಕಲಿಯುವುದು ಸುಲಭ. ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ನಿರಾಸೆಯನ್ನು ಸಮರ್ಥವಾಗಿ ಎದುರಿಸುವುದೂ ಮುಖ್ಯವೇ! ನಿರಾಸೆಯಾದಾಗ ಮಾತ್ರ ಸಫಲ ಆಸೆಗೆ ಸಂತೋಷಪಡಲು ಸಾಧ್ಯ. ಹಾಗಾಗಿ ಜೀವನದಲ್ಲಿ ಯಶಸ್ವಿಯಾಗಲು, ತೃಪ್ತಿ ಹೊಂದಲು, ಭಾವನಾತ್ಮಕವಾಗಿ ಸದೃಢರಾಗಲು ಆಸೆ-ನಿರಾಸೆ ಎರಡೂ ಬೇಕು.
***

ಪಾಲಕರಿಗೆ ಸಲಹೆಗಳು
- ಮಕ್ಕಳ ಮೂಲಭೂತ ಅಗತ್ಯಗಳು ಪೂರೈಕೆಯಾಗುವಂತೆ ಕಾಳಜಿ ವಹಿಸುವುದು

- ಪರಸ್ಪರ ಮಾತುಕತೆ

- ಅಗತ್ಯ ಮತ್ತು ಆಸೆಗಳ ನಡುವಣ ವ್ಯತ್ಯಾಸ ತಿಳಿಸಿ ಪಟ್ಟಿ ಮಾಡುವುದು. ಯಾವುದು ಯಾರಿಗೆ ಬೇಕೇಬೇಕು ಎಂದು ಒಟ್ಟಾಗಿ ನಿರ್ಧರಿಸುವುದು. (ಚಳಿಗಾಲಕ್ಕೆ ನಿನಗೆ ಸ್ವೆಟರ್ ಬೇಕು, ಆದರೆ ಹೊಸ ಶರ್ಟ್ ಬೇಕಿಲ್ಲ, ಅಮ್ಮನಿಗೆ ಶಾಲು ಕೊಡಿಸಬೇಕು)

- ಮಿತಿಯನ್ನು ನಿರ್ಧರಿಸುವುದು (ಉದಾ: ತಿಂಗಳಿಗೆ ಒಮ್ಮೆ ಮಾತ್ರ ಸಿನಿಮಾ, ವಾರಕ್ಕೊಮ್ಮೆ ತಿರುಗಾಟ)

- ಕೂಡಿ ಬಾಳುವ, ಹಂಚಿ ತಿನ್ನುವುದರ ಮಹತ್ತ್ವವನ್ನು ತಿಳಿಸುವುದು.

- ಎಲ್ಲರ, ಎಲ್ಲಾ ಆಸೆಗಳನ್ನು ಪೂರೈಸಲು ಸಾಧ್ಯವಿಲ್ಲ ಎಂಬ ಸತ್ಯದ ಅರಿವು ಮೂಡಿಸುವುದು.

- ಕುಟುಂಬದ ಹಿತಕ್ಕಾಗಿ ಸಣ್ಣ-ದೊಡ್ಡ ತ್ಯಾಗಗಳು ಅನಿವಾರ್ಯ. ಆದರೆ ಅದರ ಬೆಲೆ ಮಕ್ಕಳಿಗೆ ತಿಳಿದಿರಬೇಕು. ಆಗ ಮಾತ್ರ ಅದು ವ್ಯರ್ಥವಾಗುವುದಿಲ್ಲ. ಹಾಗೆಯೇ ಯಾವಾಗಲೂ ತಂದೆ-ತಾಯಿಯರೇ ‘ತ್ಯಾಗಮಯಿ’ ಆಗಬೇಕೆಂದಿಲ್ಲ.

- ತಮ್ಮ ಆದಾಯ-ಖರ್ಚು, ಸುಖ-ದುಃಖಗಳ ಬಗ್ಗೆ ಮಕ್ಕಳೊಂದಿಗೆ ಪೋಷಕರು ಹಂಚಿಕೊಳ್ಳಬೇಕು; ಆ ಮೂಲಕ ವಾಸ್ತವದ ಅರಿವು ಅವರಲ್ಲಿ ಮೂಡಬೇಕು.

- ಬರೀ ಮಕ್ಕಳ ಆಸೆ ಪೂರೈಸುವುದಷ್ಟೇ ತಂದೆ-ತಾಯಿಯರ ಕರ್ತವ್ಯವಲ್ಲ, ಮಕ್ಕಳೂ ತಮ್ಮ ಆಸೆಯ ಈಡೇರಿಕೆಗಾಗಿ ಶ್ರಮ ವಹಿಸಬೇಕು ಎಂಬುದನ್ನು ದೃಢವಾಗಿ ಪಾಲಿಸುವುದು.

- ತಂದೆ-ತಾಯಿಯರಿಗೆ ಮಕ್ಕಳ ಹೊರತಾಗಿಯೂ ಬದುಕಿದೆ. ಅವರದೇ ಆದ ದೇಹ, ಮನಸ್ಸು, ಆಸೆ-ಆಕಾಂಕ್ಷೆ, ಕಷ್ಟ-ಸುಖಗಳಿವೆ ಎಂಬ ವಿಷಯ ಅರ್ಥವಾಗುವಂತೆ ಮಾಡುವುದು.

ಒಟ್ಟಿನಲ್ಲಿ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ತಂದೆ-ತಾಯಿಗಳು, ಸದಾ ತ್ಯಾಗಮಯಿ ಆಗಬೇಕಿಲ್ಲ!
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ