ADVERTISEMENT
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಧರ್ಮ-ಜ್ಯೋತಿಷ್ಯ » ಧರ್ಮ

ಭವ್ಯವಾದ ಬೌದ್ಧ ಧ್ಯಾನ ಮಂದಿರ

ಭವ್ಯವಾದ ಬೌದ್ಧ ಧ್ಯಾನ ಮಂದಿರ
* ಚೇತನ್ ಶೆಟ್ಟಿ

ಧ್ಯಾನ! ಇದು ಭಾರತೀಯರ ಅತ್ಯಂತ ಪುರಾತನ ಮನೋ-ನಿಯಂತ್ರಣಾ ತಂತ್ರ. 2,500 ವರ್ಷಗಳ ಹಿಂದೆ ಇದು ಗೌತಮ ಬುದ್ಧನಿಂದ ಮತ್ತೆ ಪರಿಷ್ಕಾರವಾಗಿ, ವಿಶ್ವಕ್ಕೆ ಕೊಡುಗೆಯಾಯಿತು, ಆದರೆ ಏಕೋ ಏನೋ ಬುದ್ಧ ಕೊನೆಯುಸಿರೆಳೆದ ಬಳಿಕ, ಮುಂದಿನ ಐದು ಶತಮಾನಗಳ ಕಾಲ ಭಾರತದಲ್ಲಿ ಧ್ಯಾನ ಅಷ್ಟೇನೂ ಮಹತ್ವ ಪಡೆಯಲಿಲ್ಲ. ಮ್ಯಾನ್ಮಾರ್‌ನ ಗುರು ಸಯ್ಯಾಜಿ ಬಿಯು ಕೈನ್ ಬಳಿ ಧ್ಯಾನದ ಮಹತ್ವ ಕಲಿತ ಮುಂಬಯಿಯ ಸತ್ಯನಾರಾಯಣ ಗೊಯೆಂಕಾ ಅವರು 1969ರಲ್ಲಿ ಭಾರತದಾದ್ಯಂತ ಧ್ಯಾನ ಕೇಂದ್ರಗಳನ್ನು ಆರಂಭಿಸಿದರು. ಇಂದು ಅವರ ಅನುಯಾಯಿಗಳು, ವಿಶ್ವದ 90 ರಾಷ್ಟ್ರಗಳಲ್ಲಿ 163 ಕೇಂದ್ರಗಳಲ್ಲಿ ಧ್ಯಾನವನ್ನು ಕಲಿಸುತ್ತಿದ್ದಾರೆ.

ಇಂದು ಈ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಲಾದ, ಚಿನ್ನದ ಬಣ್ಣದಲ್ಲಿ ಕಂಗೊಳಿಸುವ ವಿಪಶ್ಶನ ಪಗೋಡಾ ಮುಂಬಿಯಯ ಬೊರಿವಿಲಿ ಸಮೀಪ ಗೊರಾಯಿ ಎಂಬಲ್ಲಿ ನಿರ್ಮಿತವಾಗಿದೆ. 135 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಧ್ಯಾನ ಮಂದಿರ ತನ್ನ ವೈಶಿಷ್ಟ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಯಾವುದೇ ಕಂಬಗಳ ಸಹಾಯವಿಲ್ಲದೆ ರಚಿಸಿರುವ, ಬಿಜಾಪುರದ ಗೋಳಗುಮ್ಮಟಕ್ಕಿಂತಲೂ ದೊಡ್ಡದಾದ ಈ ಬೃಹತ್ ಪಗೋಡ ಅಚ್ಚರಿ ಹುಟ್ಟಿಸುತ್ತದೆ. ನೆಲದಿಂದ 99 ಮೀಟರ್ ಎತ್ತರವಿರುವ ಇದರ ತಳಪಾಯವೇ 30 ಅಡಿ ಇದೆ. 1997ರಲ್ಲಿ ಶುರುವಾದ ಇದರ ನಿರ್ಮಾಣ ಕಾಮಗಾರಿಗಳು ನಿರಂತರವಾಗಿ ಹತ್ತು ವರ್ಷ ನಡೆದವು. ಕೊನೆಗೆ 2008ರ ಫೆಬ್ರವರಿಯಲ್ಲಿ ಇದನ್ನು ಪ್ರವಾಸಿಗರಿಗೆ ತೆರೆಯಲಾಯಿತು. ಇದಕ್ಕೆ ಮ್ಯಾನ್ಮಾರ್ (ಬರ್ಮಾ), ಶ್ರೀಲಂಕಾ ಮತ್ತು ಕೋಲ್ಕತ್ತದ ಬೌದ್ಧ ಸಂಸ್ಥೆಗಳ ಮತ್ತು ದಾನಿಗಳ ಉದಾರ ಕೊಡುಗೆ ಇದೆ.

ಪ್ರವಾಸಿಗರು ಈ ಪ್ರದೇಶಕ್ಕೆ ಬಂದಾಗ ಇಲ್ಲಿನ ಪಗೋಡಾ ಅಲ್ಲದೆ ಸುತ್ತಮುತ್ತಲಿನ ಕಟ್ಟಡಗಳ ರಚನೆಯಿಂದಾಗಿ ತಕ್ಷಣ ಬೇರಾವುದೋ ಪೌರಾತ್ಯ ರಾಷ್ಟ್ರಕ್ಕೆ ಹೋದಂತಾಗುತ್ತದೆ. ಈ ಪಗೋಡಾವನ್ನು ಮ್ಯಾನ್ಮಾರ್‌ನಲ್ಲಿರುವ ಶ್ವೆಡಗಾನ್ ಪಗೋಡಾದಂತೆಯೇ ನಿರ್ಮಿಸಲಾಗಿದೆ.

ಇದರ ತುತ್ತತುದಿಯಲ್ಲಿ ಕೊಡೆಯಾಕಾರದ ಅಲಂಕಾರಿಕ ಗೌಸಣಿಗೆ 40 ಅಡಿಗಿಂತಲೂ ಎತ್ತರವಿದೆ. 400 ಗಂಟೆಗಳಿಂದ ಅಲಂಕೃತಗೊಂಡು ಪ್ರತಿಯೊಂದು ಗಂಟೆಗಳೂ 12 ಇಂಚುಗಳಷ್ಟಿದ್ದು, ಅಲ್ಲಿರುವ ಗೌಸಣಿಗೆ 110 ಕೆ.ಜಿ.ಯಷ್ಟು ಭಾರವಿದೆ.

ಧ್ಯಾನ ಮಂದಿರವಲ್ಲದೆ ಪಕ್ಕದಲ್ಲೇ ಇರುವ ಇನ್ನೊಂದು ವಿಶಾಲವಾದ ಹಾಲ್‌ನಲ್ಲಿ ಬುದ್ಧ ಚರಿತ್ರೆ ವಿವರಿಸುವ 100ಕ್ಕೂ ಹೆಚ್ಚು ಕಲಾಕೃತಿಗಳಿವೆ. ಹೆಡ್‌ಫೋನ್‌ನೊಂದಿಗೆ ಪ್ರತಿಯೊಂದು ಕಲಾಕೃತಿಯ ವಿವರ ತಿಳಿಯುವ ಸೌಕರ್ಯವಲ್ಲದೆ ವಿಡಿಯೋ ಪ್ರದರ್ಶನ ಪುಸ್ತಕಗಳ ಸಂಗ್ರಹ ಇತ್ಯಾದಿಗಳನ್ನೂ ನೋಡಬಹುದು.

ಇಲ್ಲಿ ಹತ್ತು ದಿನಗಳ ಧ್ಯಾನ ತರಬೇತಿಯನ್ನು ಉಚಿತವಾಗಿ ಊಟ-ವಸತಿಯೊಂದಿಗೆ ನೀಡಲಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಸ್ವಾಭಾವಿಕ ಉಸಿರಾಟದೊಂದಿಗೆ ಆರಂಭಿಸಿ ನಂತರ ಹಂತಹಂತವಾಗಿ ವಿಪಶ್ಶನ ಕ್ರಿಯೆಯೊಂದಿಗೆ ದೇಹ, ಮನಸ್ಸನ್ನು ಮಿಳಿಸಿಗೊಳಿಸಲಾಗುತ್ತದೆ.
ಲೇಖನಕ್ಕೆ ಅನಿಸಿಕೆಗಳಿವೆ.ಬೇರೆ ಓದುಗರ ಅನಿಸಿಕೆಗಳನ್ನು ಓದಿಮತ್ತುನಿಮ್ಮ  ಅನಿಸಿಕೆಗಳನ್ನು ಬರೆಯಿರಿ.
ಇವುಗಳೂ ನಿಮಗಿಷ್ಟವಾಗಬಹುದು
 
ಇದನ್ನು ಟ್ವೀಟ್ ಮಾಡಿ
About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768