ADVERTISEMENT
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಧರ್ಮ-ಜ್ಯೋತಿಷ್ಯ » ಧರ್ಮ

ಪರಂಪರೆಗಳ ಆರಂಭ ದಿನ ಯುಗಾದಿ

ಪರಂಪರೆಗಳ ಆರಂಭ ದಿನ ಯುಗಾದಿ
* ಆರ್. ಸೀತಾರಾಮಯ್ಯ
ಭಾರತೀಯ ಸನಾತನ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳು ಅನಾದಿಕಾಲದಿಂದಲೂ ಪ್ರಾಮುಖ್ಯತೆ ಹೊಂದಿದೆ. ಸಂತಸ, ನೆಮ್ಮದಿಯ ಜತೆಗೆ ಸಡಗರ ತರುವ ಹಬ್ಬಗಳ ಆಚರಣೆ, ನಮ್ಮ ಬದುಕಿನ ಜತೆ ಅವಿನಾಭಾವ ಸಂಬಂಧ ಹೊಂದಿದೆ. ಇಂತಹ ಹಬ್ಬಗಳಲ್ಲಿ ಹಿಂದೂ ಸಂಪ್ರದಾಯದ ಮೊದಲ ಹಬ್ಬ ಹೊಸ ಸಂವತ್ಸರದ ಹಬ್ಬವೇ 'ಯುಗಾದಿ'.

ಯುಗಾದಿಯೆಂದರೆ ಸ ವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ್ಯ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಂದ್ರಮಾನ ಹಾಗೂ ಸೂರ್ಯನ ಚಲನೆಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಂದ್ರಮಾನ ಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ವೇದಾಂಗ ಜ್ಯೋತಿಷ್ಯದಂತೆ, ಮೊದಲ ನಕ್ಷತ್ರ ಅಶ್ವಿನಿ - ಅಂದರೆ ಮೇಷ ರಾಶಿಯ 0 ಡಿಗ್ರಿಯಲ್ಲಿ ಸೂರ್ಯ ಬಂದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನಿ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ.

ವರ್ಷದ ಮೂರೂವರೆ ಶುಭ ಮುಹೂರ್ತಗಳು, ಯುಗಾದಿ, ಅಕ್ಷಯ ತೃತೀಯ, ವಿಜಯದಶಮಿ ಮತ್ತು ಬಲಿಪಾಡ್ಯಮಿಯ ಅರ್ಧದಿವಸ, ಈ ಮೂರೂವರೆ ಶುಭ ಮುಹೂರ್ತಗಳಲ್ಲಿ ನಮಗೆ ಯುಗಾದಿಯೇ ವರ್ಷದ ಪ್ರಾರಂಭ ಅತ್ಯಂತ ಶುಭ ದಿವಸವಾಗಿದೆ. ಈ ದಿವಸ ಉತ್ಸವಗಳು ವರ್ಷದುದ್ದಕ್ಕೂ ಬಾಳಿನ ಬೆಂಬಲ, ಮುಂಬಲವಾಗಿ ಬರುತ್ತಿವೆ ಎಂದು ನಂಬಿಕೆ. ಕೆಲವರು ಈ ಶುಭ ಮುಹೂರ್ತದಲ್ಲಿ ಹೊಸ ಹೊಸ ಜೀವನೋಪಾಯಗಳನ್ನೂ ಹೊಸ ಹೊಸ ಉದ್ಯಮಗಳನ್ನು ಪ್ರಾರಂಭಿಸುವರು. ಏಕೆಂದರೆ ಯುಗ ಯುಗಗಳಿಂದಲೂ ಅತ್ಯಂತ ಮಹತ್ವದ ಕಾರ್ಯಗಳು ಈ ಶುಭ ದಿವಸವೇ ನಡೆದುವೆಂದು ಶಾಸ್ತ್ರ ಪುರಾಣಗಳು ಹೇಳಿವೆ.

ಯುಗಾದಿಯು ಹಲವು ಪರಂಪರೆಗಳ ಪ್ರಾರಂಭ ದಿನ. ಬ್ರಹ್ಮನು ಈ ಜಗತ್ತನ್ನು ಚೈತ್ರ ಶುಕ್ಲ ಪ್ರತಿಪದೆಯಂದು, ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನು. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ, ಕಾಲಗಣನೆ ಆರಂಭಿಸಿದನೆಂದು ಪುರಾಣದಲ್ಲಿದೆ. ಶ್ರೀ ರಾಮನು, ರಾವಣನನ್ನು ಸಂಹರಿಸಿ, ಅಯೋಧ್ಯೆಗೆ ಬಂದು ರಾಮರಾಜ್ಯವಾಳಲು ಪ್ರಾರಂಭಿಸಿದ್ದು, ಈ ಯುಗಾದಿ ದಿವಸವೇ. ವಿಷ್ಣು ಮತ್ಸ್ಯಾವತಾರವನ್ನು ತಳೆದದ್ದೆಂದೂ, ಶಾಲಿವಾಹನ, ವಿಕ್ರಮಾದಿತ್ಯನನ್ನು ಜಯಸಿದ್ದರಿಂದ ಶಾಲಿವಾಹನ ಶಕೆ ಪ್ರಾರಂಭವಾಗಿದ್ದು, ಯುಗಾದಿ ದಿವಸವೆ. ವೇದವ್ಯಾಸರು ಕಲಿಯುಗ ಪ್ರಾರಂಭವಾಗಿದ್ದು ಯುಗಾದಿಯಂದೆ ಎಂದು ತಮ್ಮ ಗ್ರಂಥದಲ್ಲಿ ವಿವರಿಸಿದ್ದಾರೆ. ಯುಗಾದಿ ದಿನದಿಂದ ಹೊಸ ವರ್ಷ ಪ್ರಾರಂಭವಾಗುವುದರಿಂದ ಹಿಂದೂ ಪಂಚಾಂಗ ಮತ್ತು ಕ್ಯಾಲೆಂಡರ್ ಸಹ ಇಂದಿನಿಂದಲೇ ಪ್ರಾರಂಭವಾಗುತ್ತದೆ.

ಯುಗಾದಿಯಂದು ಜ್ಯೋತಿಷಿಗಳಿಂದ ಹೊಸವರ್ಷದ ಫಲಗಳನ್ನು ಕೇಳುವುದು ರೂಢಿಯಲ್ಲಿದೆ. ವರ್ಷದ ಫಲ ತಿಳಿದುಕೊಳ್ಳಬೇಕೆಂದು ಧರ್ಮಸಿಂಧವಿನಲ್ಲಿ 'ಪ್ರತಿಗೃಹಂ, ಧ್ವಜಾರೋಹಣಂ, ನಿಂಬಪತ್ರಾಶನಂ, ವತ್ಸರಾಧಿಫಲ ಶ್ರವಣಂ, ನವರಾತ್ರಾರಂಭಃ ತೈಲ ಅಭ್ಯುಂಗಾದಿಶ್ಚ ಶುದ್ಧಮಾಸ ಪ್ರತಿಪದೆ ಕಾರ್ಯಃ' ಅಂದರೆ ಮನೆಯನ್ನೆಲ್ಲ ಮಾವು, ಬೇವು, ತಳಿರು-ತೋರಣಗಳಿಂದ ಅಲಂಕರಿಸಿ, ಧ್ವಜಾರೋಹಣ ಬೇವು-ಬೆಲ್ಲ ಸೇವಿಸುವುದು, ಪಂಚಾಂಗ ಶ್ರವಣದಲ್ಲಿ, ಯುಗಾದಿ ದಿವಸ ಸಂವತ್ಸರದ ಫಲವನ್ನು ಶ್ರವಣ ಮಾಡಬೇಕು. ಸೂರ್ಯನಿಂದ ಆರೋಗ್ಯವನ್ನು ಚಂದ್ರನಿಂದ ಕೀರ್ತಿಯನ್ನು ಮಂಗಳನಿಂದ ಐಶ್ವರ್ಯ, ಬುಧನಿಂದ ಬುದ್ಧಿ, ಗುರುವಿನಿಂದ ಗೌರವ, ಶುಕ್ರನಿಂದ ಶುಭವಾಣಿ, ಶನಿಯಿಂದ ಸಂತೋಷ, ರಾಹುವಿನಿಂದ ಶಕ್ತಿ, ಕೇತುವಿನಿಂದ ಕುಲೋನ್ನತಿ ಉಂಟಾಗುತ್ತದೆ. ವಾರದ ಶ್ರವಣದಿಂದ ಧೀರ್ಘಾಯುಷ್ಯ ಉಂಟಾಗುತ್ತದೆ. ನಕ್ಷತ್ರ ಶ್ರವಣದಿಂದ ಎಲ್ಲ ದೋಷಗಳು ನಿವಾರಣೆಯಾಗುತ್ತದೆ. ಯೋಗ ಶ್ರವಣದಿಂದ ವಿಯೋಗ ನಾಶವಾಗುತ್ತದೆ. ಕರಣ ಶ್ರವಣದಿಂದ ಎಲ್ಲ ಇಷ್ಟಗಳು ಫಲಿಸುತ್ತವೆ. ಇಷ್ಟದೇವತಾ ಪೂಜೆಯ ಜತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ, ಕಾಲ ಪುರುಷನ ಹಾಗೂ ವರ್ಷಾಧಿಪತಿಯ ಆರಾಧನೆ. ಚಂದ್ರದರ್ಶನ ಇವು ಯುಗಾದಿಯ ವೈಶಿಷ್ಟ್ಯ.
ಲೇಖನಕ್ಕೆ ಅನಿಸಿಕೆಗಳಿವೆ.ಬೇರೆ ಓದುಗರ ಅನಿಸಿಕೆಗಳನ್ನು ಓದಿಮತ್ತುನಿಮ್ಮ  ಅನಿಸಿಕೆಗಳನ್ನು ಬರೆಯಿರಿ.
ಇವುಗಳೂ ನಿಮಗಿಷ್ಟವಾಗಬಹುದು
 
ಇದನ್ನು ಟ್ವೀಟ್ ಮಾಡಿ

ಫೋಟೋ ಗ್ಯಾಲರಿ

ಶಾಪಿಂಗ್ ಮಾಡಿ


BlackBerry Curve 8520
Rs: 2490|You Save: 0% 
43 in 1 Card Reader
Rs: 49|You Save: 0% 
ಮತ್ತಷ್ಟು>>
About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768