ADVERTISEMENT

ಚೆಲ್ಲಾಪಿಲ್ಲಿ: ಹಾಸ್ಯದ ನಿರೀಕ್ಷೆ ಮತ್ತು ಪರೀಕ್ಷೆ

ಚೆಲ್ಲಾಪಿಲ್ಲಿ: ಹಾಸ್ಯದ ನಿರೀಕ್ಷೆ ಮತ್ತು ಪರೀಕ್ಷೆ
ವಿಮರ್ಶಕರ ರೇಟಿಂಗ್ :  
ಪಾತ್ರವರ್ಗ: ವಿಜಯ ರಾಘವೇಂದ್ರ, ಐಶ್ವರ್ಯ ನಾಗ್, ಅರವಿಂದ್, ಭೋಜರಾಜ್
ನಿರ್ದೇಶನ: ಸಾಯಿ ಕೃಷ್ಣ
ಓದುಗರ ರೇಟಿಂಗ್ :
* ಮಹಾಂತೇಶ್

ಕಾಮಿಡಿ ಸಿನಿಮಾ ಎಂದಾಕ್ಷಣ, ಅಲ್ಲಿ ಮಾತಿನ ಮಳೆಯನ್ನೇ ಸುರಿಸಬೇಕೆಂದೇನಿಲ್ಲ. ಒಂದೇ ಒಂದು ಮಾತನ್ನೂ ಆಡದೆಯೂ ನಗೆಯ ಹೊನಲನ್ನೇ ಹರಿಸಿದ ಉದಾಹರಣೆಗಳು ಸಾಕಷ್ಟಿವೆ. ಕಣ್ಣೋಟದಲ್ಲೊಂದು ಪೆದ್ದುತನ, ಮೊಗದಲ್ಲೊಂದು ಅನಪೇಕ್ಷಿತ ಗೆರೆ, ನೋಡಿದ ಗಳಿಗೆಯಲ್ಲೇ ಮುಗುಳ್ನಗು ಮೂಡಿಸಬಲ್ಲ ದೈಹಿಕ ಭಾಷೆ..ಮುಂತಾದ ಅಂಶಗಳು ಪ್ರೇಕ್ಷಕನನ್ನು ನಗಿಸಿ ನಲಿಸಲು ಸಾಕು. ಇಂಥ ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡರೆ ಆ ಹಾಸ್ಯಚಿತ್ರ ನಿಜಕ್ಕೂ ಸುಂದರ ಕಲಾಕೃತಿಯಾಗಬಲ್ಲದು. ಈ ವಾರದ 'ಚೆಲ್ಲಾಪಿಲ್ಲಿ' ಕೂಡ ಪ್ರೇಕ್ಷಕರಿಗೆ ಹಾಸ್ಯದ ರಸಾನುಭವ ಕೊಡಲೆಂದು ತೆರೆಗೆ ಬಂದ ಚಿತ್ರ. ಜನರಿಗೆ ಸಹಾಯ ಮಾಡಲೆಂದು ಹೋಗಿ ತಾನೇ ಕಷ್ಟದಲ್ಲಿ ಸಿಕ್ಕಿಹಾಕಿ ಕೊಳ್ಳುವ ಯುವಕ ಹೇಮಂತ್(ವಿಜಯ ರಾಘವೇಂದ್ರ). ಈತನ ಬದುಕಿನಲ್ಲಿ ನಡೆಯುವ ಪ್ರಸಂಗಗಳು ಸಿನಿಮಾದ ತಿರುಳು. ಜೀವನದಲ್ಲೊಂದು ದಿಕ್ಕು ದೆಸೆ ಇಲ್ಲದೆ ಸಾಗುವಾಗಲೇ ದಿಯಾ(ಐಶ್ವರ್ಯ ನಾಗ್) ಪರಿಚಯವಾಗಿ ಅವಳೆಡೆಗೆ ಆಕರ್ಷಿತನಾಗು ತ್ತಾನೆ. ಏತನ್ಮಧ್ಯೆ ಮಗುವೊಂದರ ಅಪಹರಣವಾಗಿ ಅದರ ಸುತ್ತಮುತ್ತ ಸುಳಿಯುವ ಸಂದರ್ಭಗಳನ್ನು ಜೋಡಿಸಿ ಚಿತ್ರಕತೆ ಹೆಣೆಯಲಾಗಿದೆ.

ಹಾಸ್ಯವನ್ನೇ ಬೆನ್ನಟ್ಟಿಕೊಂಡು ಹೋದಾಗ ಅದು ಮರೀಚಿಕೆಯಾಗುವ ಸಾಧ್ಯತೆಗಳೇ ಹೆಚ್ಚು. ಜನರನ್ನು ಅಳಿಸುವುದು ತುಂಬ ಸುಲಭ. ಯಾವುದೋ ಒಂದು ಸೆಂಟಿಮೆಂಟಿನಿಂದ ಕತೆಯ ಸುರುಳಿ ಸುತ್ತಿದರೆ, ಭಾರತೀಯ ಪ್ರೇಕ್ಷಕ ಕಣ್ಣೀರ ಕೋಡಿಯಾಗುತ್ತಾನೆ. ಆದರೆ ನಗಿಸುವುದು ಮಾತ್ರ ಕಷ್ಟ. ಇಲ್ಲಿ ನಿರ್ದೇಶಕರಿಗೂ ಈ ಅನುಭವ ಆಗಿರಲು ಸಾಕು. ಈ ಚಿತ್ರದ ಆರಂಭದಲ್ಲಿ ಡ್ರಗ್ ಮಾಫಿಯಾ, ಅದರಿಂದ ಹಾದಿ ತಪ್ಪುವ ಕಾಲೇಜು ಪಡ್ಡೆಗಳ ಬಗ್ಗೆ ಹೇಳುವ ವಿಷಯ ಕುತೂಹಲ ಮೂಡಿಸುತ್ತದೆ. ಆದರೆ, ನಂತರ ಇದ್ದಕ್ಕಿದ್ದಂತೆ ಇವೆರಡೂ ಪ್ರಾಶಸ್ತ್ಯ ಕಳೆದುಕೊಂಡು ಬಿಡುತ್ತವೆ. ಪ್ರಸಂಗಗಳು ಒಂದಕ್ಕೊಂದು ಬೆಸೆದುಕೊಂಡಂತೆ ಭಾಸವಾಗದೆ, ಚೆಲ್ಲಾಪಿಲ್ಲಿಯಾಗಿ ಬಿದ್ದ ತುಣುಕುಗಳಂತೆ ಅನಿಸುತ್ತವೆ. ಹೀಗಾಗಿ ಇಲ್ಲಿ ಸನ್ನಿವೇಶಗಳ ಸಮನ್ವಯ ಸಾಧ್ಯವಾಗಿಲ್ಲ.

ಕಾಮಿಡಿ ಚಿತ್ರವೆಂಬ ಹಣೆಪಟ್ಟಿಯೇನೊ ಇದಕ್ಕಿದೆ. ಆದರೆ ಜೋಕಾಲಿಯಲ್ಲಿ ಜೀಕಿದಂಥ ಹಾಸ್ಯದ ಅನುಭವ ಇಲ್ಲಿ ಆಗುವುದಿಲ್ಲ. ಬದಲಿಗೆ ಆರಕ್ಕೇರದೆ, ಮೂರಕ್ಕೆ ಇಳಿಯದೆ, ಹೈವೇ ಮೇಲಿನ ಬಸ್‌ನಂತೆ ಚಿತ್ರ ಸಾಗುತ್ತದೆ. ತಮಾಷೆಗಿಂತ ಕೆಲವು ಬಾರಿ ಮಾತಿನ ರಾಜ್ಯಭಾರವೇ ಜಾಸ್ತಿ ಎನಿಸುತ್ತದೆ. ಪೊಲೀಸ್ ಠಾಣೆಯನ್ನು ಹಾಗೂ ಅಲ್ಲಿನ ಅಧಿಕಾರಿಗಳನ್ನು ಹಾಸ್ಯಕ್ಕಾಗಿ ಬಳಸಿಕೊಳ್ಳಲಾಗಿದೆ. ಕಾಮಿಡಿ ಹೆಸರಿನಲ್ಲಿ ಪೊಲೀಸ್ ಸಿಬ್ಬಂದಿಯನ್ನು ಅಷ್ಟೊಂದು ಪೆದ್ದಾಗಿ ತೋರಿಸುವುದು ಎಷ್ಟೊಂದು ಸರಿ ಎಂಬ ಪ್ರಶ್ನೆ ಮೂಡದೇ ಇರದು. ಮಗುವೊಂದನ್ನು ಅಪಹರಿಸಿ ದಾಗ, ಅದು ಅಪ್ಪ-ಅಮ್ಮನನ್ನು ನೆನೆದು ಸಂಕಟ ಪಡುವುದು ಸಹಜ. ಇಲ್ಲಿ ಮಾತ್ರ ಅಪಹೃತ ಮಗು ತನ್ನನ್ನು ಕಿಡ್ಯಾಪ್ ಮಾಡಿದ ವರೊಂದಿಗೇ ಸಖತ್ತಾಗಿ ಎಂಜಾಯ್ ಮಾಡಿಕೊಂಡಿರು ತ್ತದೆ. ಪ್ರೇಕ್ಷಕ ನಿಗೆ ಇಂಥ ಅಪಹರಣದ ಅನುಭವ ಆಗುವುದು ಮೊದಲ ಬಾರಿ. ಹೆಣ್ಣಿನ ವೇಷದಲ್ಲಿ ವಿಜಯ್ ರಾಘವೇಂದ್ರ, ಅರವಿಂದ್ ಹಾಗೂ ಭೋಜರಾಜ್ ಕುಣಿದಿದ್ದು ಕೊಂಚ ವಿಭಿನ್ನ ಫೀಲ್ ಕೊಟ್ಟರೂ, ಅದೇನೂ ಕತೆಗೆ ಅನಿವಾರ್ಯ ಅನಿಸುವುದಿಲ್ಲ.

ಇವೆಲ್ಲವನ್ನೂ ಒಂದು ಕ್ಷಣ ಪಕ್ಕದಲ್ಲಿಟ್ಟು ನೋಡಿದಾಗ, ನಿರ್ದೇಶಕರು ಒಳ್ಳೆಯ ಅಭಿರುಚಿಯ ಹಾಸ್ಯ ಸಿನಿಮಾ ನೀಡಲು ಯತ್ನಿಸಿರುವುದು ಮೆಚ್ಚುಗೆಯ ಅಂಶ. ಇದು ಚಿತ್ರದ ಪ್ಲಸ್ ಪಾಯಿಂಟ್ ಕೂಡ. ಕಾಮಿಡಿಯ ಹೆಸರಿನಲ್ಲಿ ಇರಸು ಮುರಸುಗೊಳಿಸುವಂಥ ಸಂಭಾಷಣೆಗಳು ಇಲ್ಲಿ ಸುಳಿಯುವುದಿಲ್ಲ. ದ್ವಂದ್ವಾರ್ಥಗಳ ಕಿರಿಕಿರಿ ಇಲ್ಲ. 'ಉಸಿರೀಗ ಮರೆತಂತೆ...' ಗೀತೆ ಮೋಹಕವಾಗಿದೆ. ಸಂಗೀತವಷ್ಟೇ ಅಲ್ಲ, ಈ ದೃಶ್ಯಗಳಲ್ಲಿ ಕ್ಯಾಮೆರಾ ಕೆಲಸ ಕೂಡ ಚೆನ್ನಾಗಿ ಸಾಥ್ ನೀಡಿದೆ.
ಲೇಖನಕ್ಕೆ ಅನಿಸಿಕೆಗಳಿವೆ.ಬೇರೆ ಓದುಗರ ಅನಿಸಿಕೆಗಳನ್ನು ಓದಿಮತ್ತುನಿಮ್ಮ  ಅನಿಸಿಕೆಗಳನ್ನು ಬರೆಯಿರಿ.
ಇವುಗಳೂ ನಿಮಗಿಷ್ಟವಾಗಬಹುದು
 
ಇದನ್ನು ಟ್ವೀಟ್ ಮಾಡಿ.
About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768